Tuesday, March 13, 2012

ವಸಂತ್Mar 13, 2012 08:31 AM

ಮಾನ್ಯ ದತ್ತಾತ್ರೇಯರವರೆ,

ನಾನು ವೇದಾಧ್ಯಯನ ಮಾಡಿದವನೂ ಅಲ್ಲ. ತಮ್ಮಷ್ಟು ಸಂಸ್ಕೃತ ಪಾಂಡಿತ್ಯವೂ ನನಗಿಲ್ಲ..ತೀರಾ ಸಾಮಾನ್ಯ ವ್ಯಕ್ತಿಯಾಗಿ ನನ್ನಚಿಂತನೆ ಯನ್ನು ತಮ್ಮ ಮುಂದಿಡುತ್ತೇನೆ.

೧. ವೇದಗಳು ಪುರಾಣಗಳಿಗಿಂತಲೂ ಪ್ರಾಚೀನವಾದುದು. ಆದುದರಿಂದ ವೇದಗಳ ಉಲ್ಲೇಖ ಪುರಾಣಗಳಲ್ಲಿದೆ. ಆದರೆ ಪುರಾಣಗಳ ಉಲ್ಲೇಖ ವೇದಗಳಲ್ಲಿ ಇರಲು ಸಾಧ್ಯವಿಲ್ಲ. ಪುರಾಣಗಳಲ್ಲಿ ವೇದಗಳನ್ನು ತಿರುಚಿರುವ ಸಾಧ್ಯತೆಗಳಿವೆ. ಆದುದರಿಂದ ವೇದಗಳಿಗೆ ಪುರಾಣಗಳ ಸಮರ್ಥನೆ ಸರಿಯೆನಿಸುವುದಿಲ್ಲ...

೨. ಯಜ್ಝ ಅಂದರೆ ’ಅಧ್ವರ’ ಅಹಿಂಸೆ ಎಂಬ ಅರ್ಥವಿದೆಯೆಂದು ನಮ್ಮಂತಹವರಿಗೆ ತಿಳಿದವರು ಹೇಳಿದ, ಓದಿದ ನೆನಪು. ಪ್ರಾಣಿಬಲಿ ಎಂದರೆ ಹಿಂಸೆ, ಹಿಂಸೆಯೆಂಬುದನ್ನು ಮಾನವ ಧರ್ಮ ಎಂದು ತಾವು ಒಪ್ಪುವುದಾದರೆ ಅದು ನಮ್ಮೆಲ್ಲರ ದೌರ್ಭಾಗ್ಯ.

೩. ಪ್ರಾಣಿಬಲಿ ಎಂಬುದು ಮೂಢನಂಬಿಕೆ. ಅದನ್ನು ತಡೆಗಟ್ಟಲು ಸರಕಾರವೇ ಕಾನೂನು ರೂಪಿಸಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದುದರಿಂದ ತಮ್ಮ ಬರಹ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೆ. ಇದನ್ನು ತಾವು ಅರಿತುಕೊಳ್ಳಬೇಕು. ವೇದ, ಶಾಸ್ತ್ರಗಳ ವಿಷಯದಲ್ಲಿ ಅಲ್ಪಮತಿಯಾಗಿರುವ ನಮ್ಮಂತಹವರಿಗೆ ಈ ನಂಬಿಕೆಗಳನ್ನು ಆಚರಿಸಲು ಪ್ರೋತ್ಸಾಹಿಸಬೇಡಿ ಎಂದು ಕಳಕಳಿಯ ಪ್ರಾರ್ಥನೆ...

  • ವಸಂತ್ ರವರೆ..ನಾನು ಪ್ರಾಣಿಬಲಿ .. ನಡೆಯಲಿ ..ಮಾಡಿ ಎಂದು ನನ್ನ ಪ್ರತಿಕ್ರಿಯೆಯಲ್ಲಿ ಎಲ್ಲೂ ನಾನು ಹೇಳಿಲ್ಲ. ಪ್ರಾಣಿಬಲಿಯನ್ನು ನಾನು ವಿರೋಧಿಸುತ್ತೇನೆ. ಆದರೆ ಯಜ್ಞದಲ್ಲಿ ಪಶುವನ್ನು ಕೊಲ್ಲುವ ವಿಧಾನ ತಪ್ಪು ಕಲ್ಪನೆಯಿಂದ ಪ್ರಾರಂಭವಾದದ್ದು.. ಮತ್ತು ವೇದಗಳಲ್ಲಿ ಹಾಗೆ ಹೇಳಿಯೇ ಇಲ್ಲ ಎಂದು ವಾದಿಸಿದ ಶ್ರೀಧರ್ ರವರಿಗೆ ಉತ್ತರ ಕೊಟ್ಟಿದ್ದೇನೆ. ಅವರ ವಾದ ತಪ್ಪು ಎಂದು. ಹಿಂಸೆಯನ್ನು ಮಾನವ ಧರ್ಮ ಎಂದು ನಾನು ಹೇಳುವುದಿಲ್ಲ .. ಹೇಳಿಯೂ ಇಲ್ಲ.
    "ಪ್ರಾಣಿಬಲಿ ಎಂಬುದು ಮೂಢನಂಬಿಕೆ. ಅದನ್ನು ತಡೆಗಟ್ಟಲು ಸರಕಾರವೇ ಕಾನೂನು ರೂಪಿಸಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ". ಎಂಬ ಈ ನಿಮ್ಮ ಮಾತಿಗೆ ಉತ್ತರ ಏನೆಂದರೆ.. ಸರ್ಕಾರಕ್ಕೂ ವೇದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ...? ಸಾವಿರಾರು ವರ್ಷಗಳ ಕೆಳಗೆ ದೇಶದ ಚಕ್ರವರ್ತಿ ರಾಜರುಗಳು ಮಹರ್ಷಿಗಳ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದ ಯಜ್ಞಗಳಲ್ಲಿ ಪಶುವಧೆ ನಡೆಯುತ್ತಿತ್ತು. ಬಲಿ ಅಲ್ಲ. ( ವಧಿಸಿದ ಪಶುವಿನ ಹೊಟ್ಟೆಯಲ್ಲಿನ "ವಪೆ' ಎಂಬ ಭಾಗವನ್ನು ಮಾತ್ರ... ಯಜ್ಞದಲ್ಲಿ ಆಹುತಿ ಕೊಡಲಾಗುತ್ತದೆ.. ಅದರ ಶವವನ್ನು ಭೂಮಿಯಲ್ಲಿ ಹೂಳಲಾಗುತ್ತದೆ. ಇತ್ತೇಚೆಗೆ ನಡೆಯುವ ಪ್ರಾಣಿಬಲಿ-ನಂತರದ ಭಕ್ಷಣೆ ಅಲ್ಲಿ ನಡೆಯುವುದಿಲ್ಲ.
    ಹಾಗಾದರೆ ಯಜ್ಞ ನಡೆಸಿದ ಚಕ್ರವರ್ತಿಗಳು-- ಮಹರ್ಷಿಗಳು ಮಂತ್ರದ್ರಷ್ಟಾರರು ಅವರು ಕಂಡುಕೊಂಡ ಮಂತ್ರಗಳು (ವೇದಗಳು) ಎಲ್ಲರೂ ಮೂಢನಂಬಿಕೆ ಹೊದಿದ್ದರು ಹಾಗೂ ಇಂದಿನ ಘನಸರ್ಕಾರ ಮಾತ್ರ ವಿವೆಕವಂತ ಎನ್ನುವುದು ನಿಮ್ಮ ಅಭಿಪ್ರಾಯವೇ...? ಕಾನೂನಿಗೂ ವೇದಕ್ಕೂ ಎಲ್ಲಿಂದೆಲ್ಲಿಯ ಸಂಬಂದ ...ವಸಂತ್...?

    ನಾವೆಲ್ಲಾ ಮರೆಯುತ್ತಿರುವ ವಿಷಯ ಏನೆಂದರೆ ಯಜ್ಞದಲ್ಲಿ ಪಶುವನ್ನು ಕೊಲ್ಲುವುದು ಅದನ್ನು ಮನುಷ್ಯರು ತಿನ್ನುವುದಕ್ಕಾಗಿ ಅಲ್ಲ. ( ಮಾರಮ್ಮನ ಜಾತ್ರೆ..ಮುಂತಾದ ಅನೇಕ ಗ್ರಾಮೀಣ ಆಚರಣೆಗಳಲ್ಲಿ ಮನುಷ್ಯರು ತಾವು ತಿನ್ನಲಿಕ್ಕಾಗಿ ಪಶುಗಳನ್ನು ಕೊಲ್ಲುತ್ತಾರೆ ಮತ್ತು ತಿನ್ನುವ ಮೊದಲು ದೇವರಿಗೆ ಸಮರ್ಪಿಸಿದ್ದೆವೆಂದು ಭಾವಿಸಿತ್ತಾರೆ- ಈ ರೀತಿಯ ಪಶುಬಲಿ ನಿಷೇಧಕ್ಕೆ ಒಳಗಾಗಿದೆ.) ಆದರೆ ಯಜ್ಞದಲ್ಲಿ ಕಡಿದ ಪಶುವನ್ನು ಯಾರೂ ತಿನ್ನುವುದಿಲ್ಲ. ಗಮನಿಸಿ. ತಿನ್ನುವ ಆಸೆಯಿಂದ ಹುಟ್ಟಿಕೊಂಡ ಗ್ರಾಮೀಣ ಮೂಢ ನಂಬಿಕೆಯ ಆಚರಣೆ ಇದಲ್ಲ. ಇದು ವೇದ ಪ್ರತಿಪಾದಿತ ಯಜ್ಞದ ಪ್ರಮುಖ ಘಟ್ಟ. ಅಂತಹ ಯಜ್ಞದ ವಿಧಾನವೇ ತಪ್ಪು ಎಂದು ನೀವು ಹೇಳುವುದಾದರೆ ವೇದವೇ ತಪ್ಪು ಎಂದಾಯಿತು.

    ಸರ್ಕಾರ ನಡೆಯುದು ಹೇಗೆ...? ಸಂವಿಧಾನದ ಪ್ರಕಾರ. ಅಲ್ಲವೇ...? ಸಂವಿಧಾನ ಬರೆದದ್ದು ಯಾರು...? ಅಂಬೇಡ್ಕರ್...
    ಅಂಬೇಡ್ಕರ್ ಏನಾಗಿದ್ದರು ಗೊತ್ತೇ...? ಬೌದ್ಧ ಧರ್ಮೀಯರು.... ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡವರು... ಯಾಕೆ ಪರಿವರ್ತನೆಗೊಂಡರು...? ಮತ್ತು ಬೌದ್ಧ ಧರ್ಮ ಹೇಗೆ ಪ್ರಾರಂಭವಾಯಿತು...? ಅದರ ಮೂಲ...ತತ್ವ ಏನು ಎಂಬುದು ಎಲ್ಲರಿಗೂ ಗೊತ್ತು...
    ವೇದ ಧರ್ಮವನ್ನು ವಿರೋಧಿಸಿಯೇ ಬೌಧ್ಧ ಧರ್ಮ ಬೆಳೆದದ್ದು. ಮತ್ತು ವಿರೋಧಿಸಲಿಕ್ಕಾಗಿಯೇ ಹುಟ್ಟಿಕೊಂಡದ್ದು.. ಶೂನ್ಯವಾದ ಅದರ ಮೂಲ ತತ್ವ... ವೈದಿಕ ಆಚರಣೆಯಲ್ಲಿ... ಯಜ್ಞ ಇದೆ.. ಯಜ್ಞದಲ್ಲಿ ಪಶುಬಲಿ ಇದೆ. ಅದು ತಪ್ಪು.... ಅಹಿಂಸೆಯೇ ಪರಮ ಧರ್ಮ...ಎನ್ನುವ ಚಿಂತನೆಯೊಂದಿಗೆ ಪ್ರಾರಂಭವಾದದ್ದು ಬೌದ್ಧ ಧರ್ಮ.
    ಈ ಬೌದ್ಧರ ಹಾವಳಿ ಅತಿಯಾದಾಗ... ೧೨ ಶತಮಾನದಲ್ಲಿ ಹುಟ್ಟಿದವರೇ ಶಂಕರಾಚಾರ್ಯರು. ಅವರು ಮಾಡಿದ್ದೇನು....? ಬೌದ್ಧ ಮತಪ್ರಚಾರಕರನ್ನು ವಾದಕ್ಕೆ ಎಳೆದು ವಾದದಲ್ಲಿ ಸೋಲಿಸಿ...ದೇಶದಿಂದ ಅಟ್ಟುತ್ತಿದ್ದರು... ಈ ಮೂಲಕ ಬೌದ್ಧ ಧರ್ಮದವರನ್ನು ಓಡಿಸಿ ಮತ್ತೆ ವೈದಿಕ ಆಚರಣೆಗಳನ್ನು... ಭಾಷ್ಯ ರಚನೆಯ ಮೂಲಕ ಸ್ತೋತ್ರ ರಚನೆಯ ಮೂಲಕ ಪ್ರಚಾರ ಪಡಿಸಿದವರು... ಅವರು ಈಶ್ವರನ ಅವತಾರ ಎಂದು ಹೇಳುತ್ತಾರೆ... (ನಾನು ನಂಬುವುದಿಲ್ಲ.) ಸರ್ಕಾರದ ಮಾತನ್ನು ಅದರ ಕಾನೂನನ್ನು ನೀವು ಶಿರೋಧಾರ್ಯ ಎಂದು ಭಾವಿಸುವುದಾದರೆ.. ನೀವು ಬೌದ್ಧ ಧರ್ಮವನ್ನು ಒಪ್ಪಿಕೊಳ್ಳಬೇಕು.. ಮತ್ತು ವೇದ.. ಋಷಿಗಳು... ಶಂಕರಾಚಾರ್ಯರು..ಎಲ್ಲ ಮೂರ್ಖರು ಎಂದು ಒಪ್ಪಿಕೊಳ್ಳಬೇಕು....ಸಾಧ್ಯವೇ...?

    ಬಿಡಿ..ಅಹಿಂಸೆಯೇ ಬೇರೆ... ಯಜ್ಞದ ಚರ್ಚೆಯೇ ಬೇರೆ... ಎರಡನ್ನು ಸೇರಿಸಿ ಗೊಂದಲ ಮಾಡಿಕೊಳ್ಳಬೇಡಿ....
    ಪ್ರತಿದಿನ ಕೋಟ್ಯಂತರ ಪ್ರಾಣಿ ಪಕ್ಷಿಗಳನ್ನು ಆಹಾರಕ್ಕಾಗಿ ಕೊಲೆ ಮಾಡುವ ವಿಷಯದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಒಂದು ಯಜ್ಞ ನಡೆದರೆ ಅದರ ವಿಧಾನವನ್ನೇ ಮೂಢ ನಂಬಿಕೆ....ಪರಂಪರೆಯನ್ನೇ ತಪ್ಪು ಎಂದು ನಾವು ವಾದಿಸಲು ಶುರು ಮಾಡುತ್ತೇವೆ.. ಅದು ದುರಂತ ಅಲ್ಲವೇ...?

    Delete
  • This comment has been removed by the author.

  • ಕ್ಷಮಿಸಿ...ಶಂಕರರು ಹುಟ್ಟಿದ್ದು ೮ನೆ ಶತಮಾನದಲ್ಲಿ ೧೨ ಅಲ್ಲ.
    ಪಶುವನ್ನು ಕೊಲ್ಲುವುದು ತಪ್ಪೋ ಸರಿಯೋ...ಎನ್ನುವುದು ಬೇರೆ ವಿಚಾರ.
    ಆದರೆ ..ಯಜ್ಞದಲ್ಲಿ ಪಶುಬಲಿ ಇಲ್ಲವೇ ಇಲ್ಲ ...ಅದು ತಪ್ಪು ಆಚರಣೆ... ವೇದದಲ್ಲಿ ಹೇಳಿಯೇ ಇಲ್ಲ. ಎಂದು ವಾದಿಸಬೇಡಿ...
    ಏಕೆಂದರೆ ...ಪಶುಬಲಿ ಯಜ್ಞದಲ್ಲಿ ಇಲ್ಲದೇ ಹೋಗಿದ್ದರೆ... ಬೌದ್ಧರಿಗೆ...ತಮ್ಮ ಧರ್ಮವನ್ನು ಭಾರತದಲ್ಲಿ ..ತರಲು ಸಾಧ್ಯವೇ ಆಗುತ್ತಿರಲಿಲ್ಲ. .. . ಸ್ವಲ್ಪ ಯೋಚಿಸಿ..(ಬೌದ್ಧ ಧರ್ಮ ಎಷ್ಟು ಸರಿ.... ವೈದಿಕ ಧರ್ಮ ಎಷ್ಟು ಸಾಚಾ ಅನ್ನುವು ಬೇರೆಯದೇ ಚರ್ಚೆ.).

  • sreedhar ವೇದ ಧರ್ಮವು ಪರಮ ಅಹಿಂಸಾಧರ್ಮ

    ಹಾಸನದ ಸಮೀಪ ದೊಡ್ದಪುರದಲ್ಲಿ ಸಾಂಕೇತಿಕ ಅಶ್ವಮೇಧಯಾಗ ನಡೆಯುತ್ತಿದೆ. ಅಲ್ಲಿಗೆ ಬಂದಿರುವ ಕೆಲವು ವೇದ ವಿದ್ವಾಂಸರನ್ನು ಭೇಟಿಮಾಡಿ " ಯಜ್ಞದಲ್ಲಿ ಪ್ರಾಣಿಬಲಿಯನ್ನು ವೇದವು ಸಮ್ಮತಿಸುತ್ತದೆಯೇ? ಎಂದು ಕೇಳಿದರೆ "ಕೆಲವು ಯಜ್ಞಗಳು ಪ್ರಾಣಿಬಲಿ ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲವೆನ್ನುತ್ತಾರೆ" . ಅಲ್ಲದೆ ನಾವು ಉಪಯೋಗಿಸುವ ಹಲವು ಔಷಧಿಗಳು ಪ್ರಾಣಿಯನ್ನು ಕೊಂದು ತಯಾರಾಗುತ್ತವೆ ಎನ್ನುವ ವಿಚಾರ ನಿಮಗೆ ಗೊತ್ತೇ? ಎನ್ನುವ ತರ್ಕ ಕೂಡ ವಿದ್ವಾಂಸರು ಮಾಡುತ್ತಾರೆ. ಅಲ್ಲದೆ ಯಜ್ಞಗಳಿಗೆ ಆಹುತಿಯಾದ ಪ್ರಾಣಿಗಳು ಮೋಕ್ಷ ಪಡೆಯುತ್ತವೆ ಎನ್ನುವ ತರ್ಕ ಕೂಡ ಮಾಡುತ್ತಾರೆ.ಹೀಗೆ ಚರ್ಚೆ ಸಾಗಿದಾಗ ನನಗೆ ಸಮಾಧಾವಾಗುವ ವಿಚಾರಗಳು ಇಲ್ಲಿ ಸಿಗುವುದಿಲ್ಲವೆಂದು ಮನಗಂಡಾಗ ನಾನು ಪಂ.ಸುಧಾಕರಚತುರ್ವೆದಿಗಳ ವೇದೋಕ್ತ ಜೀವನಪಥದಲ್ಲಿ ಉಲ್ಲೇಖಿಸಿರುವ ಹಲವು ಮಂತ್ರಗಳನ್ನು ಅವರ ಗಮನಕ್ಕೆ ತಂದು ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವ ವೇದದ ಆಧಾರವನ್ನು ನನಗೆ ಕೊಡಲು ಕೋರಿ ನನ್ನ ಚರ್ಚೆಯನ್ನು ಮುಗಿಸಿದ್ದಾಯ್ತು. ಅಂತೂ ಸಾಂಕೇತಿಕ ಅಶ್ವಮೇಧಯಾಗದಲ್ಲಿ ಪ್ರಾಣಿಬಲಿ ಯಾಗದಿದ್ದರೂ ಸಾಂಕೇತಿಕವಾಗಿ ಒಂದು ಬೊಂಬೆಯನ್ನಾದರೂ ಬಲಿಕೊಡಬಹುದು.

    ಪ್ರತ್ಯಕ್ಷ ಬಲಿ ಕೊಟ್ಟರೇನು? ಸಾಂಕೇತಿಕವಾದರೇನು? ಒಟ್ಟಿನಲ್ಲಿ ಪ್ರಾಣಿಬಲಿಯನ್ನು ಪೋಷಿಸಿದನ್ತಾಯ್ತು. ವೈಜ್ಞಾನಿಕವಾಗಿ ಇಷ್ಟು ಮುಂದುವರೆದಿರುವ ಕಾಲದಲ್ಲೂ ಇಂತಹಾ ಒಂದು ಅವಿವೇಕಿ ವಿಚಾರಕ್ಕೆ ಅಂಟಿಕೊಂಡಿರುವ ವೇದ ವಿದ್ವಾಂಸರನ್ನು ನನ್ನಂತಹ ಸಾಮಾನ್ಯನು ಬದಲಾಯಿಸಲು ಸಾಧ್ಯವೇ? ನನ್ನ ಮೂರ್ಖ ಪ್ರಯತ್ನ ಬಿಟ್ಟು ನಾನು ಯಾವ ವಿಚಾರವನ್ನು ಅವರ ಗಮನಕ್ಕೆ ತಂದೇನೋ ಆ ಅಂಶಗಳನ್ನು ವೇದಸುಧೆಯ ಅಭಿಮಾನಿಗಳ ಗಮನಕ್ಕೂ ತರುವೆ. ಆಸಕ್ತಿ ಇದ್ದವರು ಚರ್ಚೆಮಾಡಬಹುದು.
    ----------------------------------------------------------------
    ಯಜ್ಞದಲ್ಲಿ ಪ್ರಾಣಿ ಬಲಿಯುಂಟು ಎಂಬ ಮಾತನ್ನು ಕೇಳುವಾಗ ನನ್ನ ಮನದೊಳಗೆ
    ತಡೆಯಲಾರದ ಸಂಕಟ . ಹಾಗಾದರೆ ನಿಜವಾಗಿ ವೇದಗಳಲ್ಲಿ ಹೇಳಿದೆಯೇ?
    ಎಂದು ಚಿಂತಿಸುವಾಗ ವೇದ ಗ್ರಂಥಗಳಲ್ಲಿ ಪರಿಹಾರವನ್ನು ಹುಡುಕ ಬೇಕೆಂಬ
    ಕಾತುರತೆ. ಆದರೆ ನನಗೆ ವೇದಜ್ಞಾನ ಇಲ್ಲವಲ್ಲ. ನನ್ನಂತವರಿಗೆ ವೇದವು ಅರ್ಥ ವಾಗುತ್ತದೆಯೇ? ಎಂದು ಯೋಚಿಸುವಾಗ ಕಣ್ಮುಂದೆ ಬಂದಿದ್ದು " ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ ವೇದೋಕ್ತ ಜೀವನ ಪಥ ಗ್ರಂಥ " ಈ ಪುಸ್ತಕದಲ್ಲಿ ಅಲ್ಲಲ್ಲಿ ವೇದ ಮಂತ್ರಗಳಿಗೆ ಆಧಾರ ನೀಡಲಾಗಿದೆ. ಅದೇ ನನ್ನಂತಹ ಸಾಮಾನ್ಯರಿಗೆ ಸುಲಭವಾಗಿ ನಿಲುಕುವ ಗ್ರಂಥ.

    ನನ್ನ ಕಣ್ಮುಂದೆ ಎರಡೇ ದಾರಿ. ಒಂದು ವೇದೋಕ್ತ ಜೀವನ ಪಥದಲ್ಲಿ ಹೇಳಿರು ವಂತೆ ಯಜ್ಞದಲ್ಲಿ ಪ್ರಾಣಿಬಲಿ ಹೇಳಿಲ್ಲವೆಂಬ ವಿಚಾರವು ಸತ್ಯವಾಗಿರ ಬೇಕು. ಅಥವಾ ಯಜ್ಞದಲ್ಲಿ ಪ್ರಾಣಿಬಲಿಗೆ ಅವಕಾಶವಿದೆ, ಕುದುರೆಯನ್ನು ವಧೆ ಮಾಡದೆ
    ಅಶ್ವಮೇಧಯಾಗವು ಪೂರ್ಣವಾಗುವುದಿಲ್ಲವೆಂಬ ವಿಚಾರವು ಸತ್ಯವಾಗಿರಬೇಕು.
    ಸತ್ಯವು ಎರಡಾಗಿರಲು ಸಾಧ್ಯವಿಲ್ಲ. ಸತ್ಯ ಎಂಬುದು ಒಂದೆ. ನನಗೊಂದು ಸತ್ಯ ,
    ಬೇರೊಬ್ಬರಿಗೊಂದು ಸತ್ಯ ಇರಲು ಸಾಧ್ಯವಿಲ್ಲ. ನಿಜವಾಗಿ ಯಾವುದು
    ಸತ್ಯವೆಂಬುದು ತಿಳಿಯ ಬೇಕಲ್ಲವೇ?
    ಈಗ ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ ವೇದೋಕ್ತ ಜೀವನ ಪಥ ಗ್ರಂಥದ ಆಧಾರದಲ್ಲಿ ಕೆಲವು ವಿಚಾರಗಳನ್ನು ಪರಿಶೀಲಿಸೋಣ.

    ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ ವೇದೋಕ್ತ ಜೀವನ ಪಥ
    ಪುಟ ಸಂಖ್ಯೆ: 55
    ------------------------------------------------------

    ಆಧಾರ: ಋಗ್ವೇದ [7.103.8]

    ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಬ್ರಹ್ಮ ಕೃಣ್ವ೦ತ: ಪರಿವತ್ಸರೀಣಂ|
    ಅಧ್ವರ್ಯವೋ ಘರ್ಮಿಣ: ಸಿಷ್ವಿದಾನಾ ಆವಿರ್ಭವ೦ತಿ ಗುಹ್ಯಾ ನ ಕೆ ಚಿತ್ ||

    ಸೋಮಿನ: = ಬ್ರಹ್ಮಾನಂದದ ಸವಿಯನ್ನು ಕಾಣುವವರು
    ಅಧ್ವರ್ಯವ: = ಅಹಿಂಸಕರೂ
    ಘರ್ಮಿಣ:= ತಪಸ್ವಿಗಳೂ
    ಸಿಷ್ವಿದಾನಾ := ಪರಿಶ್ರಮದಿಂದ ಬೆವರುವವರೂ
    ಬ್ರಾಹ್ಮಣಾಸ:= ಬ್ರಾಹ್ಮಣರು

    ಪರಿವತ್ಸರೀಣಂ ಬ್ರಹ್ಮಮ್ ಕೃಣ್ವ೦ತ: = ಸಮಸ್ತ ವಿಶ್ವದಲ್ಲಿಯೂ ವೇದ ಜ್ಞಾನವನ್ನು ಪಸರಿಸುತ್ತಾ

    ಕೇ ಚಿತ್ ಗುಹ್ಯಾ: ನ =ಕೆಲವರು ಗುಪ್ತವಾಗಿದ್ದವರಂತೆ

    ಆವಿರ್ಭವಂತಿ= ಬೆಳಕಿಗೆ ಬರುತ್ತಾರೆ.

    ಭಗವದುಪಾಸನೆಯಿಂದ ಆನಂದ ಪ್ರಾಪ್ತಿ , ಅಹಿಂಸಾ ತತ್ವ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆಗಳು ,ಕಷ್ಟ ಸಹಿಷ್ಣುತೆ -ಇವು ಬ್ರಾಹ್ಮಣರ ಲಕ್ಷಣಗಳು. ಅಂದಮೇಲೆ ಒಬ್ಬ ಬ್ರಾಹ್ಮಣ ಪುರೋಹಿತರು ಪ್ರಾಣಿ ಬಲಿಯನ್ನು ಪ್ರೋತ್ಸಾಹಿಸುವುದು ಸರಿಯೇ?
    ----------------------------------------------------
    ವೇದ ಧರ್ಮವು ಪರಮ ಅಹಿಂಸಾಧರ್ಮ:

    ವೇದದಲ್ಲಿ ಅಹಿಂಸಾ ಪ್ರತಿಪಾದನೆಯನ್ನು ಇನ್ನು ಮುಂದೆ ನೋಡೋಣ.

    ಆಧಾರ: ಋಗ್ವೇದ [1.1.4]

    ಅಗ್ನೇ ಯಂ ಯಜ್ಞಮಧ್ವರಂ ವಿಶ್ವತ: ಪರಿಭೂರಸಿ |
    ಸ ಇದ್ ದೇವೇಷು ಗಚ್ಚತಿ|

    ಅಗ್ನೇ= ಓ ಜ್ಯೋತಿರ್ಮಯ
    ಯಂ ಅಧ್ವರಂ ಯಜ್ಞಮ್ = ಯಾವ ಹಿಮ್ಸಾರಹಿತವಾದ ಯಜ್ಞವನ್ನು
    ತ್ವಂ ವಿಶ್ವತ: ಪರಿಭೂರಸಿ= ನೀನು ಎಲ್ಲೆಡೆಯಿಂದ ಅಧ್ಯಕ್ಷನಾಗಿ ಆವರಿಸುತ್ತೀಯೋ
    ಸ ಇತ್ = ಅದೇ
    ದೇವೇಷು ಗಚ್ಚತಿ = ದಿವ್ಯತತ್ವಗಳನ್ನು ಸೇರುತ್ತದೆ. [ ನನ್ನ ಮಾತು: ಭಗವಂತನನ್ನು ಸೇರುತ್ತದೆ]
    ----------------------------------------
    ಆಧಾರ: ಯಜುರ್ವೇದ [1.1]

    ಯಜಮಾನಸ್ಯ ಪಶೂನ್ ಪಾಹಿ =ಯಜ್ಞ ಕರ್ತನ ಪಶುಗಳನ್ನು ಪಾಲಿಸು
    ----------------------------------------
    ಆಧಾರ: ಯಜುರ್ವೇದ [13.41]

    ಅಶ್ವಂ ಮಾ ಹಿಂಸೀ = ಕುದುರೆಯನ್ನು ಹಿಂಸಿಸಬೇಡ
    ----------------------------------------------
    ಆಧಾರ: ಯಜುರ್ವೇದ [13.43]

    ಗಾಂ ಮಾ ಹಿಂಸೀ = ಹಸುವನ್ನು ಹಿಂಸಿಸಬೇಡ
    -----------------------------------------------
    ಆಧಾರ: ಯಜುರ್ವೇದ [13.44]

    ಅವಿಂ ಮಾ ಹಿಂಸೀ = ಮೇಕೆಯನ್ನು ಹಿಂಸಿಸಬೇಡ
    -------------------------------------------
    ಆಧಾರ: ಯಜುರ್ವೇದ [13.47]

    ಇಮಂ ಮಾ ಹಿಂಸೀದ್ವಿರ್ ಪಾದಂ ಪಶುಮ್ =
    ದ್ವಿಪಾದ ಪಶುವನ್ನು ಹಿಂಸಿಸಬೇಡ
    ------------------------------------------

    ಆಧಾರ: ಅಥರ್ವ ವೇದ [10.1.29]

    ಅನಾಗೋ ಹತ್ಯಾ ವೈ ಭೀಮಾ = ನಿಷ್ಪಾಪವಾದ ಪ್ರಾಣಿಯನ್ನು ಕೊಲ್ಲುವುದು
    ಭಯಂಕರ ಪಾಪ
    -----------------------------------------------
    ಆಧಾರ: ಅಥರ್ವ ವೇದ [8.2.25]

    ಸರ್ವೋವೈ ತತ್ರ ಜೀವತಿ
    ಗೌರಶ್ವ: ಪುರುಷ: ಪಶು:|
    ಯತ್ರೆದಂ ಬ್ರಹ್ಮ ಕ್ರಿಯತೇ
    ಪರಿಧಿರ್ಜೀವನಾಯ ಕಮ್||

    ಯತ್ರ = ಎಲ್ಲಿ
    ಇದಂ ಬ್ರಹ್ಮ = ಈ ವೇದವು
    ಕಮ್ = ಒಳಿತಾಗಿ
    ಜೀವನಾಯ = ಜೀವನಕ್ಕೆ
    ಪರಿಧಿ: ಕ್ರಿಯತೇ = ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ
    ಗೌ: = ಹಸುವು
    ಅಶ್ವ: = ಕುದುರೆ
    ಪುರುಷ: = ಮಾನವನು
    ಪಶು: = ಇತರ ಮೃಗಗಳು
    ಸರ್ವ: = ಎಲ್ಲವೂ
    ವೈ = ನಿಜವಾಗಿ
    ಜೀವತಿ = ಬದುಕುತ್ತವೆ.

    ಎಲ್ಲಿ ಈ ವೇದವು ಸರ್ವ ಜೀವಿಗಳ ಒಳಿತಿಗಾಗಿ ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಬದುಕುತ್ತವೆ. ಅಂದರೆ ಇಲ್ಲಿ "ಆವರಣ" ಎಂಬ ಪದವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. " ಸರ್ವಜೀವಿಗಳ ಒಳಿತಿಗಾಗಿ ಎಲ್ಲಿ ವೇದವು ಆವರಣವಾಗಿ ಮಾಡಲ್ಪದುತ್ತದೋ" ಅಂದರೆ ವೇದವು ಎಲ್ಲಾ ಜೀವಿಗಳಿಗೆ ರಕ್ಷಣೆಯಾಗಿ ಎಲ್ಲಿ ಸುತ್ತು ಗೋಡೆ ಯಾಗಿ ನಿಲ್ಲುತ್ತದೋ ಅಲ್ಲಿ ಎಲ್ಲಾ ಜೀವಿಗಳು ನಿಜವಾಗಿ ಬದುಕುತ್ತವೆ" . ಎಷ್ಟು ವಿಶಾಲವಾದ ಅರ್ಥವಿದೆ!

    ಅಂದರೆ ವೇದವು ಎಲ್ಲಾ ಜೀವಿಗಳ ನೆಮ್ಮದಿಯ,ನಿರ್ಭೀತ ಬದುಕಿಗಾಗಿ ಕರೆಕೊದುತ್ತದೆಯೇ ಹೊರತೂ ಯಾವ ಜೀವಿಗಳ ಹಿಂಸೆಗೆ ಆಸ್ಪದವೇ ಇಲ್ಲ ಎಂದು ಭಾವಿಸಬಹುದಲ್ಲವೇ?

    ಅಲ್ಲದೆ ಒಂದು ಪದವನ್ನು ಸಮಯಕ್ಕೆ ತಕ್ಕಂತೆ ಅರ್ಥೈಸುತ್ತಾರಾದರೂ ವಿಶ್ವದ ಒಳಿತಿಗಾಗಿಯೇ ಇರುವ ವೇದವನ್ನು ನಾವು ಹೀಗೆಯೇ ಅರ್ಥೈಸಬೇಕಲ್ಲವೇ?

    ವೇದದಲ್ಲಿ ಈ ಮೇಲಿನ ಅಂಶಗಳೆಲ್ಲಾ ಇರುವುದನ್ನು ಆಧಾರ ಸಮೇತ ಪಂ. ಸುಧಾಕರ ಚತುರ್ವೆದಿಗಳು ಉಲ್ಲೇಖಿಸಿರುವುದರಿಂದ ಮೂಲ ವೇದದಲ್ಲಿ ಹಿಂಸೆ ಯನ್ನು ಪ್ರೋತ್ಸಾಹಿಸುವ ಅಂಶಗಳು ಕಾಣ ಬರುವುದಿಲ್ಲ ವೆಂಬ ವಿಚಾರವನ್ನು ಅನಿವಾರ್ಯವಾಗಿ ಒಪ್ಪಬೇಕಾಗಿದೆ. ಈಗ ಹೇಳಿ ಈ ಆಧಾರಗಳು ಸುಳ್ಳೇ?
    ಸುಳ್ಳಾಗಿದ್ದರೆ ಸತ್ಯ ಯಾವುದು?

    ಕೊನೆಯ ಮಾತು:

    ಮೂಲವೇದ ಗ್ರಂಥವು ಯಾವುದು? ಎನ್ನುವ ವಿಚಾರದಲ್ಲೂ ಗೊಂದಲಗಳು ಇರಬಹುದು. ಆದರೆ ಇಡೀ ಪ್ರಪಂಚದ ನೆಮ್ಮದಿಗೆ "ಅಹಿಂಸಾ ಮಾರ್ಗವು ಇಂದಿನ ಅತೀ ಅಗತ್ಯವಾದ ವಿಚಾರವಾಗಿದ್ದು, ಮನುಕುಲಕ್ಕೆ ಬೆಳಕಾಗಿರುವ ವೇದದ ಕಡೆ ಇಡೀ ವಿಶ್ವವು ನೋಡುತ್ತಿರುವ ಸಂದರ್ಭದಲ್ಲಿ ಯಜ್ಞ ದಲ್ಲಿ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವುದು ತರವಲ್ಲವೆನ್ಬುದು ನನ್ನ ಸ್ಪಷ್ಟ ನಿಲುವು.


    ಈ ಮೇಲಿನ ಅಶ್ವಮೇಧ ಯಾಗದ ಅಹಿಂಸೆಯ ಬಗೆಗಿನ ಲೇಖನವನ್ನು ಬರೆದಿರುವ ಶ್ರೀಧರ್ ರವರೆ...
    ನೀವು ಕೆಲವು ವಿಷಯಗಳನ್ನು ಗಮನಿಸಬೇಕು.
    ನೀವು ಭೇಟಿಯಾದ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ವೇದ ವಿದ್ವಾಂಸರು ಅವಿವೇಕಿ ಚಿಂತಗೆ ಅಂಟಿಕೊಂಡಿದ್ದಾರೆ ಎಂದು ಟೀಕಿಸಿದ್ದೀರಿ.( ಏಕೆಂದರೆ ಅವರು ನಿಮ್ಮ ಚಿಂತನೆಯನ್ನು ಸರಿ ಎಂದು ಒಪ್ಪಿಕೊಂಡಿಲ್ಲ.)
    ನಿಮ್ಮ ಮನಸಿನಲ್ಲಿರುವ ಅಭಿಪ್ರಾಯ ಪರಮ ಸತ್ಯ ಎಂದು ನೀವು ಭಾವಿಸಿರುವ ಹಾಗಿದೆ. ನಿಮ್ಮ ಮಾತುಗಳನ್ನು ಒಪ್ಪದವರೆಲ್ಲ ನಿಮಗೆ ಅವಿವೆಕಿಗಳಾಗಿ ಕಾಣ ಬಹುದು.. ನೀವು ಕೂಡ ಅವರ ಕಣ್ಣಿಗೆ ಹಾಗೆಯೇ ಕಾಣ ಬಹುದು ಅದು ಸಹಜ..
    ನೀವು ವೇದವು ವೇದವು ಅಹಿಂಸೆಯನ್ನು ಪ್ರತಿಪಾದಿಸುತ್ತದೆ ಎಂದು ಕೆಲ ಮಂತ್ರಗಳ ಅಧಾರ ಕೊಟ್ಟಿರುತ್ತೀರಿ..
    ನಾನು ವೇದವು ಹಿಂಸೆಯನ್ನೇ ಪ್ರತಿಪಾದಿಸುತ್ತದೆ ಎಂದು ಅದಕ್ಕೆ ಕೆಲವು ಮಂತ್ರಗಳನ್ನು ಅಧಾರ ಕೊಡುತ್ತೇನೆ..ಏನು ಹೇಳುತ್ತೆರೀರಿ...? ವೇದಗಳಲ್ಲಿಯೇ ಕೆಲ ಭಾಗಳಲಿ ಹೇಳಿದ ವಿಷಯದ ವಿರೋಧ ಮತ್ತೊಂದು ಭಾಗದಲ್ಲಿ ಕಂಡು ಬರುವುದನ್ನು ನೀವು ಗಮನಿಸಿದ್ದೀರಾ...? ಮತ್ತು ನೀವು ನೇರವಾಗಿ ವೇದವನ್ನು ತಿಳಿದವರಲ್ಲ.. ಯಾರೋ ಮಾಡುವ ಪ್ರವಚನಗಳನ್ನು ಕೇಳಿ ಮತ್ತು ಪುಸ್ತಗಳನ್ನು ಓದಿ ಅದರಿಂದ ಪ್ರಭಾವಿತರಾಗಿ ಒಂದು ಅಭಿಪ್ರಾಯಕ್ಕೆ ಬಂದಿದ್ದೀರಿ. ಆ ನಿಮ್ಮ ಅಭಿಪ್ರಾಯಕ್ಕೆ ಧಕ್ಕೆ ಮಾಡುವವರೆಲ್ಲ ಅವಿವೆಕಿಗಳಾಗಿ ಕಾಣುತ್ತಿದ್ದಾರೆ. ವೇದದ ತುಂಡು ತುಂಡು ಭಾಗಗಳನ್ನು ಉಪಯೋಗಿಸಿಕೊಂಡು ಏನು ಬೇಕಾದರೂ ವಾದಿಸಬಹುದು. "ಕತ್ತೆ"ಯನ್ನು "ಕುದುರೆ"ಯೆಂದು ಸಾಬೀತು ಮಾಡಬಹುದು.. ನೀವು ನೀಡುವ ಆಧಾರಗಳು ಹಾಗೆಯೇ ಇವೆ. ಅದೇ ವೇದ ಅದೇ ಅಧ್ಯಾಯ ಮತ್ತೊಂದು ಮಂತ್ರವನ್ನು ತೆಗೆದು ಅದರ ಅರ್ಥ ಹೀಗೇ ಎಂದು ಅದೇ ಆಧಾರವನ್ನು ತಲೆಕೆಳಗೆ ಮಾಡಿ ಹಾಕಬಹುದು.. ಇದೆಲ್ಲ ತರ್ಕ ತಿಳಿದವರು ಮಾಡುವ ಕೆಲಸಗಳು. ತರ್ಕ ಚೆನ್ನಾಗಿ ತಿಳಿದವರು ತಮಗೆ ಅನುಕೂಲವಾಗುವ ಮತ್ತು ತಮ್ಮ ವಾದಕ್ಕೆ ಹೊಂದುವ ಮಂತ್ರಭಾಗಗಳನ್ನು ಎತ್ತಿ ಉದಾಹರಿಸುತ್ತಾರೆ. ಕೆಲ ಸಾರಿ ಅವುಗಳ ಅರ್ಥವನ್ನು ತಮ್ಮ ವಾದಕ್ಕೆ ತಕ್ಕಂತೆ ತಿರುಚಿಕೊಳ್ಳುತ್ತಾರೆ. ನೀವು ಉದಾಹರಿಸಿರುವ ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಈ ಮಂತ್ರದಲ್ಲಿ ಅಧ್ವರ್ಯವೋ ಘರ್ಮಿಣ: ಎಂಬ ವಾಕ್ಯದಲ್ಲಿ "ಅಧ್ವರ್ಯವಃ" ಎಂಬ ಶಬ್ದಕ್ಕೆ ನೀವು ನೀಡಿರುವ ಅರ್ಥ ಅಧ್ವರ್ಯವ: = ಅಹಿಂಸಕರೂ ಎಂದು.. ಆದರೆ ದಯಮಾಡಿ ಸಾಯಣಾಚಾರ್ಯರು ಬರೆದ ಋಗ್ವೇದ ಭಾಷ್ಯ ಮತ್ತು "ನಿರುಕ್ತ" ಗ್ರಂಥದ ಆಧಾರದ ಮೇಲೆ ಮತ್ತು "ಮೀಮಾಂಸಾ ಶಾಸ್ತ್ರ" ದ ಅನುಸಾರ ಈ ಶಬ್ದದ ಅರ್ಥ ನೋಡಿ. (ಇದು ವೇದದ ಅರ್ಥ ತಿಳಿಯುವ ಸರಿಯಾದ ಕ್ರಮ ) ಅಧ್ವರ್ಯವಃ ಅಂದರೆ ಅಹಿಂಸಕರು ಎಂಬ ಅರ್ಥ ಇಲ್ಲ.
    ಇದೆ ರೀತಿ "ಯಜಮಾಸ್ಯ ಪಶೂನ್ ಪಾಹಿ" ಎಂಬ ವಾಕ್ಯದ ಅರ್ಥ ಕೂಡ ತುಂಬಾ ಬಾಲೀಶವಾಗಿ ನೀಡಿದ್ದೀರಿ. "ಯಜಮಾನನ ಪಶುಗಳನ್ನು ರಕ್ಷಿಸು" ಎಂದು ಇಂದ್ರನಲ್ಲಿ ಬ್ರಮ್ಹಣರು ಪ್ರಾರ್ಥಿಸುವ ಮಂತ್ರ ಅದು. ಅದರ ಅರ್ಥ ಪಶುಗಳನ್ನು ಕೊಲ್ಲಬಾರದು ಎಂದು ಅಲ್ಲ. ಯಜಮಾನನ ಮನೆಯಲ್ಲಿ ಕುದುರೆ, ಕೋಳಿ..ಹಸು ಎಮ್ಮೆ ಎತ್ತು ಮುಂತಾದ ಪಶುಸಂಪತ್ತು ಇರುತ್ತದೆ.. ಅವುಗಳನ್ನು ವಿವಿಧ ರೋಗಬಾಧೆಗಳಿಂದ ರಕ್ಷಿಸು ಎಂಬ ಆಶಯ ಅದರ ಹಿಂದೆ ಇದೆ.

    ಯಜ್ಞದಲ್ಲಿ ಪಶುಬಲಿ ಯಾವುದೇ ತಪ್ಪು ಕಲ್ಪನೆಯಿಂದ ಚಾಲ್ತಿಗೆ ಬಂದದ್ದಲ್ಲ. ನಾನು ಇದಕ್ಕೆ ಅಧಾರ ಕೊಡಲು ಹೋಗುವುದಿಲ್ಲ. ಏಕೆಂದರೆ.. ಅದಕ್ಕೆ ವಿರುದ್ಧವಾದ ಮತ್ತೊಂದು ಅಧಾರ ಸಿದ್ಧವಾಗಿರುತ್ತದೆ. ಸಂಸ್ಕೃತ ಭಾಷೆ ಅಷ್ಟೊಂದು ವಿಶಾಲವಾದ ಭಾಷಾ ಸಂಪತ್ತನ್ನು ಸಾಹಿತ್ಯವನ್ನೂ ಹೊಂದಿದೆ. ಇಂತಹ ವಿಷಯಗಳನ್ನೆಲ್ಲ... ಸಾಮಾನ್ಯ ಗ್ರಹಿಕೆಯಿಂದ ನಾವೀನಾವೇ ಆಲೋಚಿಸಬೇಕು.. "ಅವರು ಹೀಗೇ ಹೇಳಿದರು" ... "ಇವರು ಹೀಗೇ ಹೇಳಿದರು" ಎಂದು ಬೇರೆಯವರ ಅಭಿಪ್ರಾಯಗಳ, ಪ್ರವಚನಗಳ ಆಧಾರದ ಮೇಲೆ ನಮ್ಮ ಚಿಂತನೆ ನಿಲ್ಲ ಬಾರದು. ವೇದ ಕಾಲದಲ್ಲಿ ಪ್ರಾಣಿವಧೆ ಒಂದು ಸಾಮಾನ್ಯ ಸಂಗತಿಯಾಗಿತ್ತು.. ಇಂದಿನ ನಮ್ಮ ಬದಲಾದ ಕಾಲಮಾನಕ್ಕೆ ಮತ್ತು ಜೀವನವಿಧಾನಕ್ಕೆ ಅದೊಂದು ಹೇಯ ಕೃತ್ಯವಾಗಿ ಕಾಣಬಹುದು, ನಾವು ಕಾಲಚಕ್ರದಲ್ಲಿ ಹಿಂದಕ್ಕೆ ಪ್ರಯಾಣ ಮಾಡಿ ಅಂದಿನ ವೇದ ಕಾಲೀನ ಜೀವನ ವಿಧಾನ ...ಸ್ಥಿತಿಗತಿಗಳ ಪರಿಕಲ್ಪನೆ ನಮ್ಮ ಮನಸಿಗೆ ಬಂದರೆ ..ಎಲ್ಲ ವಿವರ ನಮ್ಮ ಮನಸಿನಲ್ಲಿ ಸಿಗುತ್ತದೆ.

    ಕೆಲವೊಂದು ಉದಾಹರಣೆ ಕೇಳಿ
    ೧, ಅಂದಿನ ಕಾಲದಲ್ಲಿ ಸ್ತ್ರೀಯರಿಗೆ ಉಪನಯನ ಮಾಡುತ್ತಿದ್ದರು
    ೨, ಶ್ರಾದ್ಧದಲ್ಲಿ ಮಾಂಸಾಹಾರದ ಅಡಿಗೆ ಮಾಡಿಸುತ್ತಿದ್ದರು. ( ಶ್ರೀರಾಮ ದಶರಥನ ಶ್ರಾದ್ಧಕ್ಕೆ ಒಳ್ಳೆ ಜಾತಿಯ ಹಸುಗಳನ್ನು ಕೊಲ್ಲಿಸಿ ಬ್ರಾಮ್ಹನರಿಗೆ ಊಟ ಬಡಿಸಿದ್ದ. ಇದು ವಾಲ್ಮೀಕಿ ಬರೆದದ್ದು - ಯಾರೋ ಅನಾಮಧೇಯ ಹೇಳಿದ್ದಲ್ಲ.)
    ೩, ವಾತಾಪಿ ಎಂಬುವನು ತನ್ನ ಸಹೋದರ ಇಲ್ವಲನ ಜೊತೆ ಸೇರಿ ಬ್ರಾಮ್ಹನರ ವಧೆ ಮಾಡುತ್ತಿದ್ದ. ಇಲ್ವನ ಅತಿಥಿಯನ್ನು ಒಳಗೆ ಕರೆಯುತ್ತಿದ್ದ. ವಾತಾಪಿ ಮೇಕೆಯ ವೇಷವನ್ನು ಧಾರಣೆ ಮಾಡುತ್ತಿದ್ದ. ಆ ಮೇಕೆಯನ್ನು ಕಡಿದು ಭೋಜನ ಸಿದ್ಧ ಮಾಡಿ ಅತಿಥಿಗೆ ಬಡಿಸಿ ಅವನು ಊಟ ಮಾಡಿದ ಮೇಲೆ ಇಲ್ವಲನು "ವಾತಾಪಿ ಹೊರಗೆ ಬಾ" ಎಂದು ಕರೆಯುತ್ತಿದ್ದ. ಆಗ ವಾತಾಪಿ ಅತಿಥಿಯಾ ಹೊಟ್ಟೆ ಸೀಳಿಕೊಂಡು ಹೊರಗೆ ಬರುತ್ತಿದ್ದ. ಈ ವಿಷಯ ತಿಳಿದ ಅಗಸ್ತ್ಯ ಮುನಿಯು ಅವರ ಮನೆಗೆ ಊಟಕ್ಕೆ ಹೋದರೆ ಎಂದಿನಂತೆಯೇ ನಡೆಯಿತು .. ಆದರೆ ಊಟ ಮೊಗುದ ಕೂಡಲೇ.. ಅಗಸ್ತ್ಯರು " ವಾತಾಪಿ ಜೀರ್ನೋ ಭವ" ಎಂದು ಹೇಳಿದ ಕೂಡಲೇ... ವಾತಾಪಿ ಹೊಟ್ಟೆಯಲ್ಲಿ ಜೀರ್ಣವಾಗಿ ಹೋದ... ಅಲ್ಲಿ ಅಗ್ಗಸ್ತ್ಯರು ಊಟ ಮಾಡಿದ್ದು ಮೇಕೆ ಮಾಂಸವನ್ನು.. ಈ ಕಥೆ ಚಂದಮಾಮ ಪುಸ್ತಕದಲ್ಲಿ ಕೂಡ ಬಂದಿದೆ. ಎಲ್ಲರಿಗೂ ಗೊತ್ತಿದೆ. ಈಗಲೂ ಪ್ರತಿದಿನ ಊಟ ಆದ ಕೂಡಲೇ "ವಾತಾಪಿ ಜೀರ್ನೋ ಭವ" ಎಂದು ಹೇಳುವ ರೂಢಿ ಚಾಲ್ತಿಯಲ್ಲಿದೆ.
    ಇಷ್ಟು ಸಾಕು....ಅಂದುಕೊಳ್ಳುತ್ತೇನೆ...
    ಮಾಂಸಾಹಾರ... ಪಶುಬಲಿ...ಮುಂತಾದವುಗಳು.....ಅಗಸ್ತ್ಯ..... ರಾಮ... ವಿಶ್ವಾಮಿತ್ರ ಮುಂತಾದರ ಜೀವನದಲ್ಲಿ ...ನಮ್ಮ ವೈದಿಕ ಇತಿಹಾಸದಲ್ಲಿ ... ಎಷ್ಟು ಸಾಮಾನ್ಯ ಎಂಬುದನ್ನು ತಿಳಿಸಲಿಕ್ಕೆ. ಇಂದಿನ ಕಾಲದಲ್ಲಿ ಪ್ರಾಣಿಬಲಿ ಬೇಡ ಎಂದು ಹೇಳಿ... ಅದು ನ್ಯಾಯವಾಗಿರುತ್ತದೆ. ಆದರೆ ವೇದದಲ್ಲಿ ಅಹಿಂಸೆ ಹೇಳಿದೆ ಎಂದು ಯಾರದೂ ಮಾತು ಕೇಳಿಕೊಂಡು ...ಯಾವುದೂ ಮಂತ್ರದ ತುಂಡನ್ನು ಉದಾಹರಣೆ ಕೊಡಬೇಡಿ...
    ಈ ಅಲ್ಪನ ಬಗ್ಗೆ ಕ್ಷಮೆ ಇರಲಿ...
    ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ.
    ನಮಸ್ಕಾರ